ನ್ಯೂಯಾರ್ಕ್: ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಈಗ ಜಾಗತಿಕ ಸ್ವರೂಪ ಪಡೆದುಕೊಳ್ತಿದೆ. ಇರಾನ್ ನಡೆಸುತ್ತಿರುವ ಸರಣಿ ಪ್ರತೀಕಾರದ ದಾಳಿಗಳನ್ನು ಮಟ್ಟಹಾಕಲು ವಿಶ್ವದ ಪ್ರಬಲ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ(European Allies support US) ಈಗ ಅಮೆರಿಕದೊಂದಿಗೆ ಕೈಜೋಡಿಸಿವೆ.
ಯುರೋಪಿಯನ್ ರಾಷ್ಟ್ರಗಳ ಜಂಟಿ ಘೋಷಣೆ
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಭಾನುವಾರ ತಡರಾತ್ರಿ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇರಾನ್ ತನ್ನ ಮಿತ್ರ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಅಪಾಯಕಾರಿ ಮತ್ತು ಜವಾಬ್ದಾರಿರಹಿತ ದಾಳಿಗಳನ್ನು ಕಂಡು ತಾವು ಆಘಾತಕ್ಕೊಳಗಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಹಿತಾಸಕ್ತಿಗಳನ್ನು ಮತ್ತು ಈ ಪ್ರದೇಶದಲ್ಲಿರುವ ನಮ್ಮ ಮಿತ್ರ ರಾಷ್ಟ್ರಗಳನ್ನು ರಕ್ಷಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಇರಾನ್ ತನ್ನ ಮೂಲದಿಂದಲೇ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಉಡಾವಣೆ ಮಾಡದಂತೆ ತಡೆಯಲು ನಾವು ಅಮೆರಿಕದೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಈ ಮೂವರು ನಾಯಕರು ಗುಡುಗಿದ್ದಾರೆ.
ಇದನ್ನೂ ಓದಿ: ಅವನು ಸ್ಕೆಚ್ ಹಾಕಿದ್ದ.. ನಾನು ಫಿನಿಶ್ ಮಾಡಿದೆ! ಖಮೇನಿ ಸಾವಿನ ಹಿಂದೆ ಇತ್ತಾ ಪರ್ಸನಲ್ ರಿವೆಂಜ್: ಟ್ರಂಪ್ ಮಾತಿನ ಅಸಲಿ ಅರ್ಥವೇನು..? Donald Trump
ಯುದ್ಧದ ಕಣವಾದ ಗಲ್ಫ್ ರಾಷ್ಟ್ರಗಳು
ಶನಿವಾರ ಖಮೇನಿ ಹತ್ಯೆಯಾದ ಬೆನ್ನಲ್ಲೇ ಇರಾನ್ ಉಗ್ರ ರೂಪ ತಾಳಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳಿರುವ ಕುವೈತ್, ಬಹ್ರೇನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮೇಲೆ ಇರಾನ್ ಸತತವಾಗಿ ಕ್ಷಿಪಣಿ ಮಳೆಯನ್ನು ಸುರಿಸುತ್ತಿದೆ. ಈ ದಾಳಿಗಳಲ್ಲಿ ಅಮೆರಿಕದ ಮೂವರು ಸೈನಿಕರು ಮೃತಪಟ್ಟಿದ್ದು, ಯುರೋಪಿಯನ್ ರಾಷ್ಟ್ರಗಳ ನಾಗರಿಕರಿಗೂ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ, ಇರಾನ್‌ನ ಶಸ್ತ್ರಾಸ್ತ್ರ ನೆಲೆಗಳನ್ನು ಅವುಗಳ ಮೂಲದಲ್ಲೇ ಧ್ವಂಸಗೊಳಿಸಲು ಅಮೆರಿಕದ ಎಪಿಕ್ ಫ್ಯೂರಿ ಕಾರ್ಯಾಚರಣೆಗೆ ಈ ರಾಷ್ಟ್ರಗಳು ತಮ್ಮ ಸೇನಾ ಬೆಂಬಲ ಸೂಚಿಸಿವೆ.
ಟ್ರಂಪ್ ಮತ್ತು ನೆತನ್ಯಾಹು ರಣತಂತ್ರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ನನ್ನನ್ನು ಮುಗಿಸುವ ಮೊದಲೇ ನಾನು ಅವನನ್ನು ಮುಗಿಸಿದೆ ಎಂಬ ಆಕ್ರಮಣಕಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಇರಾನ್ ಜನತೆಗೆ ತಮ್ಮ ಸರ್ಕಾರದ ವಿರುದ್ಧವೇ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಈಗ ಯುರೋಪಿಯನ್ ರಾಷ್ಟ್ರಗಳೂ ಈ ಬಣಕ್ಕೆ ಸೇರಿರುವುದು ಇರಾನ್ ಅನ್ನು ಜಾಗತಿಕವಾಗಿ ಏಕಾಂಗಿ ಮಾಡಿದೆ.
ಇರಾನ್‌ನಲ್ಲಿ ಆಂತರಿಕ ಕುಸಿತ
ಒಂದೆಡೆ ಹೊರಗಿನಿಂದ ಬಲಿಷ್ಠ ರಾಷ್ಟ್ರಗಳ ದಾಳಿ, ಇನ್ನೊಂದೆಡೆ ದೇಶದ ಒಳಗಿನ ಅಸ್ಥಿರತೆ ಇರಾನ್ ಅನ್ನು ಹೈರಾಣಾಗಿಸಿದೆ.
ಅಸ್ಥಿರ ನಾಯಕತ್ವ: ಖಮೇನಿ ಮತ್ತು ಅವರ ಪ್ರಮುಖ ಸೇನಾ ಕಮಾಂಡರ್‌ಗಳು ಮೃತಪಟ್ಟಿರುವುದರಿಂದ ಇರಾನ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವವರೇ ಇಲ್ಲದಂತಾಗಿದೆ.
IRGC ಪ್ರಭಾವ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಈಗ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಹೊಂಚು ಹಾಕುತ್ತಿದೆ. ಇದು ನಾಗರಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.
ಜಾಗತಿಕ ಮಾರುಕಟ್ಟೆ ಮೇಲೆ ಕರಿನೆರಳು
ಈ ಯುದ್ಧವು ಕೇವಲ ಗಲ್ಫ್ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ವಿಶ್ವದ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಈ ಪ್ರದೇಶದಲ್ಲಿನ ಉದ್ವಿಗ್ನತೆ, ಜಾಗತಿಕ ತೈಲ ಬೆಲೆಗಳನ್ನು ಗಗನಕ್ಕೇರಿಸುವ ಸಾಧ್ಯತೆ ಇದೆ. ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ,(ಏಜೆನ್ಸೀಸ್).
ಸುದ್ದಿಗಾಗಿ ಸಂಪರ್ಕಿಸಿ.9380127872/9916746881
إرسال تعليق